ಹೊನ್ನಪ್ಪ, ಹೆಸರುಘಟ್ಟದ

	19ನೆಯ ಶತಮಾನದ ಕನ್ನಡ ವಿದ್ವಾಂಸರು. ಸಂಸ್ಕøತ, ಕನ್ನಡ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿಕೊಂಡಿದ್ದ ಇವರು, ಆಗಿನ ಮೈಸೂರು ಸಂಸ್ಥಾನದ ಶಿಕ್ಷಣ ಇಲಾಖೆಯಲ್ಲಿ ಸೇವೆಸಲ್ಲಿಸಿದರು. ಬೆಂಗಳೂರು ಜಿಲ್ಲೆ ಉಪ್ಪಾರ ಹಳ್ಳಿಯ ಶಾಲೆಯಲ್ಲಿ ಉಪಾಧ್ಯಾಯರಾಗಿ(1885) ಅನಂತರ ತ್ಯಾಮಗೊಂಡ್ಲು ಕನ್ನಡ ಶಾಲೆಯ ಮುಖ್ಯೋಪಾಧ್ಯಾಯರಾಗಿ (1890) ಕೆಲಸಮಾಡಿದರು.

	ಇವರು ಕೆಲವು ಪ್ರಾಚೀನ ಕನ್ನಡ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿ ದ್ದಾರೆ.  ತೋಂಟದಾರ್ಯನ ಕರ್ಣಾಟಕ ಶಬ್ದಮಂಜರಿಯನ್ನು ಟೀಕಾಸಹಿತ ಪರಿಷ್ಕರಿಸಿದ್ದಾರೆ(1884). ಲಿಂಗಮಂತ್ರಿಯ ಕಬ್ಬಿಗರ ಕೈಪಿಡಿಗೆ ವಿಬುಧ ಚಣದ್ರಚಕೋರ ಚಂದ್ರಿಕೆ ಎಂಬ ಟೀಕೆ ಬರೆದಿದ್ದಾರೆ(1885). ಹರಿಹರನ ಗಿರಿಜಾಕಲ್ಯಾಣವನ್ನು ಮೊತ್ತಮೊದಲಿಗೆ ಸಂಪಾದಿಸಿ ಪ್ರಕಟಿಸಿದ(1886) ಕೀರ್ತಿ ಇವರದು. ಷಡಕ್ಷರ ಕವಿಯ ರಾಜಶೇಖರ ವಿಳಾಸವನ್ನು ವಿಸ್ತಾರವಾದ ಪೀಠಿಕೆ, ಟೀಕೆ, ಟಿಪ್ಪಣಿಗಳೊಂದಿಗೆ ಸಂಪಾದಿಸಿ ಪ್ರಕಟಿಸಿದ್ದಾರೆ(1890). ರಾಮಸ್ವಾಮಿಶಾಸ್ತ್ರಿ ಎಂಬ ವಿದ್ವಾಂಸರೊಂದಿಗೆ ಇವರು ಸಿದ್ಧಪಡಿಸಿದ ಕರ್ಣಾಟಕ ಕಲ್ಪದ್ರುಮಂ(1885) ಎಂಬ ನಿಘಂಟು ಭಾಷಾಭ್ಯಾಸಿಗಳಿಗೆ ಉಪಯುಕ್ತ ಗ್ರಂಥ. ಇವರು ರಚಿಸಿರುವ ವ್ಯಾಕರಣ ಸಂಗ್ರಹ(1890) ಎಂಬ ಕೃತಿ ವ್ಯಾಕರಣದಲ್ಲಿ ಇವರಿಗಿದ್ದ ಪಾಂಡಿತ್ಯಕ್ಕೆ ದ್ಯೋತಕವಾಗಿದೆ.						
	(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ